ದೇವಾಲಯದ ಇತಿಹಾಸ
English
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಮಲೆನಾಡೂ ಹೌದು, ತುಳುನಾಡೂ ಹೌದು. ಈ ತಾಲೂಕಿನ ಗಡಿ ನೇತ್ರಾವತಿ ನದಿ. ಅದಕ್ಕೆ ತಾಗಿಕೊಂಡಿರುವ ಗ್ರಾಮ ಕರಾಯ, ಇಲ್ಲಿ ಸುಮಾರು ಏಳು ಶತಮಾನಗಳಷ್ಟು ಹಳೆಯ ದೇವಾಲಯವಿದೆ. ಇಲ್ಲಿ ಪ್ರಧಾನ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ,
ಕರಾಯ ಮತ್ತು ಮಹಾಲಿಂಗ ಈಯೆರಡು ಪದಗಳ ಕುರಿತು ಜನಜನಿತವಾದ ಕಥೆಯೊಂದಿದೆ. ಮಲೆನಾಡಿನ ಭಾಗವಾದ ಕರಾಯ ಎಂದು ಮುಂದೆ ಹೆಸರು ಪಡೆದ ಈ ಪ್ರದೇಶದಲ್ಲಿ ಕುಂಬಾರರು ಬಹುಸಂಖ್ಯೆಯಲ್ಲಿದ್ದು ತಮ್ಮ ಕುಲವೃತ್ತಿಗನುಗುಣವಾಗಿ ಮಣ್ಣಿನಿಂದ ಮಡಿಕೆಗಳನ್ನು ತಯಾರಿಸಿ ಮನೆಮನೆಯಲ್ಲಿ ಮಾರಿ ಜೀವನ ಮಾಡುತ್ತಿದ್ದರು. ಬಾವಂತಬೆಟ್ಟು, ಕುದುರೆಟ್ಟಿ, ಮುಗ್ಗ ಎಂಬ ಮೂರು ಸ್ಥಳಗಳು ಈವೂರಲ್ಲಿ ಪ್ರಸಿದ್ಧಿ ಪಡೆದಿದ್ದವು, ಬಾವಂತಬೆಟ್ಟಿನಲ್ಲಿ ಜೈನ ಮತೀಯರಿದ್ದು ಅವರು ಊರಿನ ಅರಸರಂತಿದ್ದರು. ಕುದುರೆಟ್ಟಿನಲ್ಲಿ ಕುದ್ದಣ್ಣಾಯ ಎಂಬ ಕುಲನಾಮದ ಬ್ರಾಹ್ಮಣರಿದ್ದರು. ಈ ಊರವರಲ್ಲಿ ಕುದ್ದಣ್ಣಾಯರು ಮಾತ್ರ ಅರಸರ ಎದುರು ಕುಳಿತುಕೊಳ್ಳುವ ಅರ್ಹತೆ ಪಡೆದಿದ್ದರು. ಕುಳ್ಕೊಣ್ಣುಟ್ಬಾರ್ (ತುಳುವಿನಲ್ಲಿ) ಎಂಬ ಅನ್ವರ್ಥಪದವು ಕುದ್ದಣ್ಣಾಯ ಎಂಬ ರೂಪಾಂತರವನ್ನು ಹೊಂದಿತು. ಮುಗ್ಗದಲ್ಲಿ ಬಿಲ್ಲವರು ವಾಸವಾಗಿದ್ದರು. ಈ ಮೂರು ಮನೆಯವರು ಈ ಊರಿನ ಸಂರಕ್ಷಣೆಯ ಭಾರವನ್ನು ಹೊತ್ತಿದ್ದರು. ಗುತ್ತಿನ ಗುರಿಕಾರರು ಎನಿಸಿದ್ದರು.
ಒಂದು ಬಾರಿ ಕುಂಬಾರರು ಮಡಕೆಗಳನ್ನು (ಕರಗಳನ್ನು) ಕಟ್ಟಿ ನೆಲದ ಮೇಲೆ ಒಣಗಲೆಂದು ಕೌಚಿಟ್ಟಿದ್ದರು. ಒಣಗಿದ ಬಳಿಕ ಆವಿಗೆಯಲ್ಲಿ ಒಟ್ಟುವ ಪದ್ಧತಿ. ಅದರಂತೆ ಆವಿಯ ಮೇಲೆ ಕರಗಳನ್ನು ಒಂದೊಂದಾಗಿ ಎತ್ತಿ ಅಚ್ಚು ಕಟ್ಟಾಗಿ ಒಟ್ಟತೊಡಗಿದರು. ಕೊನೆಯ ಹಂತದಲ್ಲಿ ಒಂದು ಮಡಕೆ ಉಳಿದಿತ್ತು. ಅದನ್ನು ಎತ್ತಲು ತೊಡಗಿದಾಗ ಅದು ನೆಲಬಿಟ್ಟು ಕದಲಲೇ ಇಲ್ಲ. ಶಕ್ತಿಯುಕ್ತಿಗಳನ್ನು ಬಳಸಿ ಕೀಳಲು ತೊಡಗಿದರು. ಅದು ಅಲ್ಲಾಡಲಿಲ್ಲ. ಗಾಬರಿಗೊಂಡ ಕುಂಬಾರರು ಬಾವಂತಬೆಟ್ಟಿನ ದೊರೆಗಳ ಬಳಿ ಮೊರೆಯಿಟ್ಟರು. ದೊರೆಗಳು ಗುತ್ತಿನ ಗುರಿಕಾರರನ್ನು ಕೂಡಿಕೊಂಡು ಅಲ್ಲಿಗೆ ಧಾವಿಸಿ ಬಂದರು. ಮಡಕೆಯನ್ನು ಎತ್ತಲು ಅಪ್ಪಣೆ ಕೊಟ್ಟರು. ಎತ್ತಲು ಆಗಲಿಲ್ಲ. ಮಡಕೆ ನಿಶ್ಚಲವಿತ್ತು. ಗುತ್ತಿನವರೂ ಎತ್ತಲು ಹೋಗಿ ವಿಫಲರಾದರು. ಸ್ವತಃ ದೊರೆಗಳೇ ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ದೇವರ ಮಹಿಮೆಯೆಂದು ತಿಳಿದು ಭಯಭಕ್ತಿಗಳಿಂದ ಕೈಮುಗಿದು ಮುಂದಿನ ಕಾರ್ಯವನ್ನು ಯೋಚಿಸಲು ಅರಸರು ಅರಮನೆಗೆ ತೆರಳಿದರು. ಈ ಅದ್ಭುತಕ್ಕೆ ಬೆರಗುಗೊಂಡ ತುಳುವರು 'ಉಂದು ವಾ ಕರಯ' (ಇದು ಯಾವ ಮಡಕೆ) ಎಂದು ಹೇಳುತ್ತಾ ಮನೆ ಸೇರಿದರು. ಜನರ ಮನದಲ್ಲಿ ಮಂಕಿನ ಕತ್ತಲೆ. ಊರಲ್ಲಿ ಸಹಜ ಕತ್ತಲೆ ಕವಿಯಿತು. ಕತ್ತಲೆಯಲ್ಲಿ 'ಕರ' ಕರಗಿತು. ಅನಿರೀಕ್ಷಿತ ಚಳಿಗಾಲದ ಮಂಜು ಸುರಿಯುತ್ತಿತ್ತು.
ಮರುದಿನ ದೊರೆಗಳು ಪರಿವಾರದೊಂದಿಗೆ ಅಲ್ಲಿಗೆ ಬಂದರು. ಅದ್ಭುತ, ಆಶ್ಚರ್ಯ ಕಾದಿತ್ತು. ಮಡಿಕೆಯ ಹಸಿಮಣ್ಣು ಮಂಜಿನಿಂದ ಕರಗಿ ಕೆಳಗೆ ಸುತ್ತಲು ಚೆಲ್ಲಿತು. ಅದರ ನಡುವೆ ಲಿಂಗಾಕಾರದ ಶಿಲೆಯ ಖಂಡವೊಂದು ತಲೆಯೆತ್ತಿ ನಿಂತಿತ್ತು. ಮಲ್ಲಲಿಂಗೋಯವೆಂದು ತುಳುವರ ನಾಲಗೆ
ಯಲ್ಲಿ ಸುದ್ದಿ ಹರಡಿತು. ವಿಸ್ಮಯಗೊಂಡ ಅರಸರು ಗುತ್ತಿನವರೊಡನೆ ಚರ್ಚೆ ನಡೆಸಿ ಅಲ್ಲೇ ದೇವರಿಗೆ ಗುಡಿ ಕಟ್ಟಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿದರು.
ಆ ಕುಂಬಾರರು ದೇವರ ಮಹಿಮೆಗೆ ಬೆರಗಾಗಿ ಭಯಗೊಂಡು ಆ ದೇವರ ಪ್ರಭಾವಲಯದಿಂದ ದೂರವಿರಲು ನಿರ್ಧರಿಸಿ ನೆರೆ ಗ್ರಾಮವಾದ ಇಳಂತಿಲಕ್ಕೆ ಸಾಮೂಹಿಕವಾಗಿ ವಲಸೆ ಹೋದರು.
ಪ್ರಕೃತ ಇತಿಹಾಸ ಪ್ರಸಿದ್ಧವಾದ ಈ ದೇವಾಲಯದ ರಚನೆಗಳು ಶಿಥಿಲಗೊಂಡಿವೆ. ಈ ಕ್ಷೇತ್ರಕ್ಕೆ ಹಿಂದಿದ್ದ ಘನತೆ ವೈಭವಗಳನ್ನು ಪುನಃ ಸ್ಥಾಪಿಸಲು ಊರವರು ಸಿದ್ಧರಾಗಿದ್ದಾರೆ.ಊರ ಹಾಗೂ ಪರವೂರ ದಾನಿಗಳ ಸಹಕಾರದಿಂದ ಸುಮಾರು ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನವನಿರ್ಮಾಣವಾಗಿ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಾಯಿತು.